Friday, 16 September 2011


ದಳವಾಯಿಯಿಲ್ಲದ ಎದುರಾಳಿಗಳು:ಮತ್ತಿಹಳ್ಳಿ ಮದನ್ ಮೋಹನ್ ವ್ಯಾಖ್ಯಾನ    
ಮತ್ತಿಹಳ್ಳಿ ಮದನ್ ಮೋಹನ್
ಶುಕ್ರವಾರ, 16 ಸೆಪ್ಟೆಂಬರ್ 2011 (04:35 IST) 
ರಾಹುಲ್ ಗಾಂಧಿ
ಲೋಕಸಬೆಗೆ ಹೊಸ ಚುನಾವಣೆ ಬರುವದಕ್ಕೆ ಅಧಿಕೃತವಾಗಿ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ ಇಂದಿನ ಗೊಂದಲಮಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ಹೊಸ ಚುನಾವಣೆಗಳು ಈ ಮೊದಲೇ ಬಂದರೂ ಏನೂ ಆಶ್ಚರ್ಯ ಪಡಬೇಕಾಗಿಲ್ಲ. ಬೇಗನೇ ಚುನಾವಣೆಗಳು ನಡೆಯಬಹುದು ಎಂಬ ಭಾವನೆ ಬರುತ್ತಿದ್ದಂತೆ. ರಾಷ್ಟ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ ಮತ್ತು ಭಾಜಪಗಳಲ್ಲಿ ಒಂದು ರೀತಿಯ ಒಳಗಿನ ತಳಮಳಕ್ಕೆ ಒಳಗಾಗಿರುವ ಲಕ್ಷಣಗಳು ಸ್ಪಷ್ಟ ಕಾಣಿಸುತ್ತಿವೆ. ಈ ಎರಡೂ ಪಕ್ಷಗಳು ಧುರೀಣತ್ವದ ಅಭಾವದ ಜಾಡ್ಯದಿಂದ ಬಳಲುತ್ತಿವೆ. ಇವರಿಬ್ಬರ ಮುಂದಿರುವ ಮುಖ್ಯ ಪ್ರಶ್ನೆ ಮುಂದಿನ ಲೋಕಸಭಾ ಚುನಾವಣಾ ಹೋರಾಟವನ್ನು ಯಾರ ಧುರೀಣತ್ವದಲ್ಲಿ  ಮಾಡಬೇಕು? ಯಾರನ್ನು ಭಾವಿ ಪ್ರಧಾನಿಯಾಗಿ ಬಿಂಬಿಸಬೇಕು ಎಂದು.
ಇವರನ್ನು ಹೊರತು ಪಡಿಸಿ ತೃತೀಯ ರಂಗದ ವೇದಿಕೆಯಲ್ಲಿ ಇತರ ಪಕ್ಷಗಳು ಒಟ್ಟಾಗಬಹುದು ಎನ್ನುವ ಸಾಧ್ಯತೆಗಳೂ ಕಡಿಮೆ. ಅಲ್ಲಿರುವ ಯಾರ ಧುರೀಣರ ತಳವು ಭದ್ರವಾಗಿಲ್ಲ. ಯಾವ ಹೊಸ ಧುರೀಣತ್ವದ ಮುಖಗಳು ಕಾಣಿಸುತ್ತಿಲ್ಲ. ಬಿಹಾರದ ಮಾಯಾವತಿಯವರು ತಮಗೆ ಹೊಸ ಪಾದರಕ್ಷೆ ಬೇಕಾದರೆ ಒಂದು ವಿಮಾನವನ್ನೆ ಮುಂಬೈಗೆ ಕಳಿಸುತ್ತಾರೆ.. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯರ ತೃಣಮೂಲ ಕಾಂಗ್ರೆಸ ಮತ್ತು ಎಡ ಪಕ್ಷಗಳು, ತಮಿಳುನಾಡಿನ ದ್ರಾಮುಕ/ ಅದ್ರಾಮುಕಗಳು ತಮ್ಮ ರಾಜ್ಯಗಳ ರಾಜಕಾರಣಗಳನ್ನು ಬಿಟ್ಟು ಹೊರಗೆ ನೋಡುವಂತಿಲ್ಲ.  ಸಮಾಜವಾದಿ ಮತ್ತು ರಾಷ್ಟ್ರಿಯ ಜನತಾದಳಗಳು ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಕಳೆದು ಹೋಗಿರುವ ತಮ್ಮ ರಾಜಕೀಯ ನೆಲೆಗಳನ್ನು ಗಳಿಸುವದರಲ್ಲಿ ಮಗ್ನವಾಗಿವೆ. ತೆಲುಗು ದೇಶಂ ತನಗೆ ಬಿದ್ದ ಚುನಾವಣಾ ಹಿನ್ನಡೆ ಹೊಡೆತದಿಂದ ಸುಧಾರಿಸಿಕೊಂಡಿಲ್ಲ.
ಕಾಂಗ್ರೆಸ್ಸನ್ನೇ ತೆಗೆದುಕೊಳ್ಳಿ. ಎರಡನೆಯ ಅವಧಿಯ ಕಾಂಗ್ರೆಸ ನೇತೃತ್ವದ ಯು ಪಿ. ಏ ಸರಕಾರ ಈಗ ಪೂರ್ತಿಯಾಗಿ ಹೆಸರು ಕೆಡಿಸಿಕೊಂಡಿದ್ದಂತೂ ಸೂರ್ಯಪ್ರಕಾಶದಷ್ಟೇ ಸತ್ಯವಾಗಿದೆ.  ಮೊದಲ ಅವಧಿಯಲ್ಲಿ ಒಳ್ಳೇ ನಾಯಕನೆಂದು ತಲೆಯ ಮೇಲೆ ಕೂಡಿಸಿ ಮೆರೆಸಿದ ಪ್ರಧಾನ ಮಂತ್ತಿ ಮನಮೊಹನ ಸಿಂಗ ಅವರು ಇಂದು ರಾಜಕೀಯವಾಗಿ  ಪಕ್ಷಕ್ಕೆ ಆಸ್ತಿಯಾಗಿರುವ ಬದಲು ಹೊರೆಯಾಗಿದ್ದಾರೆ. ಅವರ ನಿರ್ಗಮನ ಮತ್ತು ರಾಹುಲ ಗಾಂಧಿಯವರ ಆಗಮನ ಖಚಿತ, ಆದರೆ ಅದು ಎಂದಾಗುತ್ತದೆ  ಚುನಾವಣೆಯ ಮುನ್ನವೇ ಆಥವಾ ನಂತರವೇ? ಎನ್ನುವದೇ ಈಗಿರುವ ಪ್ರಶ್ನೆ.ಮನ ಮೋಹನ ಸಿಂಗ್
ಮನಮೋಹನ ಸಿಂಗರ ಅವನತಿಗೆ ಮುಖ್ಯ ಕಾರಣ ಕೇಂದ್ರ ಸರಕಾರದ ಸುತ್ತ ಹಬ್ಬಿರುವ ಹಗರಣಗಳ ಜಾಲ. ಆದಿಕಾರಾರೂಢ ರಂಗದ ಒಬ್ಬ ಮಂತ್ರಿ ಮಂತ್ರಿ ಏ ರಾಜಾ (ದ್ರಾಮುಕ) ಮತ್ತು ಇಬ್ರರು ಸಂಸದರು- ಸುರೇಶ ಕಲ್ಮಾಡಿ (ಕಾಂಗ್ರೆಸ) ಮತ್ತು ಕಾಣಿಮೋಳಿ (ದ್ರಾಮುಕ) ಈಗಾಗಲೇ ಸೆರೆಮನೆ ಸೇರಿದ್ದಾರೆ. ಸೋರಿ  ಹೋಗಿರುವ ಹಣವು ಎದೆ ಝಲ್ಲೆನಿಸುವಷ್ಟಿದೆ ಒಂದಾದರೊಂದ ಮೇಲೆ ಒಂದು ಹಗರಣಗಳು ಅಪ್ಪಳಿಸುತ್ತಲೇ ಇವೆ. ಇನ್ನೂ ಎಷ್ಟು ಹೊಸ ಹಗರಣಗಳು ಹೊರ ಬರಲು ಕಾದಿವೆಯೋ ಗೊತ್ತಿಲ್ಲ. ಕಾಂಗ್ರೆಸು ಭ್ರಷ್ಟಾಚಾರದ ಕೂಪವಾಗಿದೆ.  ಸರಕಾರದ ಒಳಗೊಳಗೆ ನಡೆದಿರುವ ಈ ಅವ್ಯಾಪಾರೇಷು ವ್ಯಾಪಾರದ ಬಗ್ಗೆ  ಮನಮೋಹನ ಸಿಂಗರಿಗೆ ಎಷ್ಟು ಅರಿವಿತ್ತು ಮತ್ತು ಅದರಲ್ಲಿ ಇವರ ಪಾತ್ರವೇನು ಎನ್ನುವದು ಇನ್ನೂ  ಹೊರಬರಬೇಕಾಗಿದೆ. ಆದರೆ ಒಂದು ಮಾತು ಮಾತ್ರ ನಿಜ. ಈ ಸರಕಾರದ ಧುರೀಣರಾಗಿ ಎಲ್ಲ ಹಗರಣಗಳ ಹೊಣೆಯನ್ನು ಅವರು ಹೊರದೇ ವಿಧಿಯಿಲ್ಲ. ಅವರು ಅಸಮರ್ಥರು ಎಂಬ ತಲೆಪಟ್ಟಿಯನ್ನು ಅವರ ಹಣೆಗೆ ಕಟ್ಟಲಾಗುತ್ತಿದೆ. ನಾನು ಕೆಲವು ತಪ್ಪು ಮಾಡಿರಬಹುದು ಯಾವುದರಲ್ಲಿ ನಾನು ಭಾಗಿಯಲ್ಲ ಎನ್ನುವ ಪ್ರಧಾನ ಮಂತ್ರಿಗಳ ಉದ್ಗಾರ ಅವರ ಅಸಹಾಯಕತೆಯನ್ನು ಸೂಚಿಸುತ್ತದೆ.
ಅವರ ವರ್ಚಸ್ಸನ್ನು ಅವರ ಪಕ್ಷವೇ ಕಡಿಮೆಮಾಡಲು ಹವಣಿಸುತ್ತಿದೆ ಎನ್ನುವದಕ್ಕೆ ನಿದರ್ಶನ- ಅಣ್ಣಾ  ಹಜಾರೆಯವರ ಉಪವಾಸದ ಪ್ರಕರಣವನ್ನು ನಿರ್ವಹಿಸುವಲ್ಲಿ ನಡೆದುಕೊಂಡ ರೀತಿ. ಹೆಜ್ಜೆಗೆ ಅವರನ್ನು ದಾರಿ ತಪ್ಪಿಸು, ಕಂಗೆಡಿಸುವ, ಅವರನ್ನು ಖಳನಾಯಕನೆಂದು ಬಿಂಬಿಸುವ ಪ್ರಯತ್ನಗಳನ್ನು ಅವರ ಪಕ್ಷ ಮತ್ತು ಕೇಂದ್ರ ಸರಕಾರದ ಮಂತ್ರಿಗಳು ಮಾಡಿದುದನ್ನು ಮರೆಯುವಂತಿಲ್ಲ.
ಹಜಾರೆಯವರು ಎತ್ತಿದ ವಿಷಯಗಳ ಬಗ್ಗೆ ಸರಕಾರದ ಮತ್ತು ಕಾಂಗ್ರೆಸ ಪಕ್ಷದ ನಿಲುವು ಏನು ಎನ್ನುವದೆ ಕೊನೆಯ ತನಕ ತಿಳಿಯದ ಹಾಗೆ, ಕ್ರಿಕೆಟ ಆಟದಲ್ಲಿ ಚೆಂಡನ್ನು ಬಾರಿಸಿದ ಜಾಗಗಳಲ್ಲಿ ಕ್ಷೇತ್ರ ರಕ್ಷಕರನ್ನು ನಿಲ್ಲಿಸಲು ಪರದಾಡುತ್ತಿದ್ದ ನಾಯಕನಂತಹ ದಯನೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸು ಸಿಲುಕಿತ್ತು.
ಅಡ್ವಾಣಿಹಜಾರೆಯವರು ಕೈಕೊಂಡ ಎರಡು ಉಪವಾಸ ಪ್ರಕರಣಗಳಲ್ಲಿ ಮಾತುಕತೆಯಲ್ಲಿ ಭಾಗವಹಿಸಿದ ಕೇಂದ್ರ ಮಂತ್ರಿಗಳ ವರ್ತನೆಯಲ್ಲಿ ಅಂದರೆ ಕಪಿಲ ಸಿಬಲ, ಚಿದಂಬರಂ, ಪ್ರಣವ ಮುಖರ್ಜಿ, ಸಲ್ಮಾನ ಖುರ್ಷಿದ ಮೊದಲಾದವರಲ್ಲಿ ತಾಳಮೇಳವೇ ಇರಲಿಲ್ಲ.. ಒಬ್ಬರ ಮಾತು ಮತ್ತು ಆಶ್ವಾಸನಗಳನ್ನು ಇನ್ನೊಬ್ಬರು ತಳ್ಳಿಹಾಕುವದು ಅಲಕ್ಷಿಸುವದು ಸಾಮಾನ್ಯವಾಗಿತ್ತು. ಅವರಲ್ಲಿ ಎಲ್ಲರೂ ಪ್ರಧಾನ ಮಂತ್ರಿ ಪದವಿಯ ಆಕಾಂಕ್ಷಿಗಳಂತೆ ಮಾತನಾಡುತ್ತಿದ್ದರು ಎನ್ನುವ ಅಣ್ಣಾ ಹಜಾರೆಯವರ ಮಾತಿನಲ್ಲಿ ಸಾಕಷ್ಟು ತಥ್ಯವನ್ನು ಕಾಣಬಹುದು. ಎಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು ಎಂದರೆ ಪ್ರಧಾನ ಮಂತ್ರಿಗಳು ತಮ್ಮ ಅಭಿಪ್ರಾಯವನ್ನು ಹಜಾರೆಯವರಿಗೆ ತಲುಪಿಸಲು ಕಳಂಕಿತ ವ್ಯಕ್ತಿತ್ವ ಉಳ್ಳ ವಿಲಾಸ ರಾವ ದೇಶಮುಖರನ್ನು ಅವಲಂಬಿಸಬೇಕಾಯಿತು..
ಸರಕಾರದಲ್ಲಿರುವ ಮಂತ್ರಿಗಳ ವರ್ತನೆ ಈ ರೀತಿ ಇದ್ದರೆ ಪಕ್ಷದವರ ವರ್ತನೆಯೇನೂ ಭಿನ್ನವಾಗಿರಲಿಲ್ಲ. ಕಾಂಗ್ರೆಸ ಪಕ್ಷದ ಅಧಿಕೃತ ವಕ್ತಾರ ಮನೀಷ ಸಿಸೋದಿಯಾ ಹಜಾರೆಯವರನ್ನು  ಹೀನಾಮಾನವಾಗಿ ಬಯ್ಯುವ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಮನಮೊಹನ ಸಿಂಗರ ಹೆಸರು ಕೆಡಿಸಿ, ರಾಹುಲ ಗಾಂಧಿಯವರುನ್ನು ಪರ್ಯಾಯ ನಾಯಕರೆಂದು ಪ್ರತಿಬಿಂಬಿಸುವ ಪಕ್ಷದ ಪ್ರಯತ್ನವನ್ನು ಯಾರಾದರೂ ಗುರುತಿಸ ಬಹುದಿತ್ತು. ಸರಕಾರವು ತನ್ನ ಮೊದಲ ಹಟಮಾರಿತನ ಧೋರಣೆ ಬಿಟ್ಟು ಹಜಾರೆಯವರ ಬಗ್ಗೆ ಮೃದು ಧೋರಣೆ ತಳೆಯುವದಕ್ಕೆ ರಾಹುಲ ಗಾಂಧಿಯವರ ಮಧ್ಯಸ್ಥಿಕೆಯೇ ಕಾರಣವೆಂಬ ಭಾವನೆಗೆ ಚಾಲನೆ ಕೊಟ್ಟವರು ಪಕ್ಷದವರೇ. ಹಜಾರೆಯವರು ಎತ್ತಿರುವ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಸರಕಾರ ಒದ್ದಾಡುತ್ತಿರುವಾಗ ರಾಹುಲ ಗಾಂಧಿಯವರ ಚೊಚ್ಚಲ ಸಂಸತ್ತಿನಲ್ಲಿನ ಭಾಷಣ ಬೇರೆಯೇ ಜಾಡು ಹಿಡಿದು ಹಜಾರೆಯವರನ್ನು ಟೀಕಿಸುವದರ ಜೊತೆಗೆ ಭ್ರಷ್ಟಾಚಾರ ನಿರೋಧ ಪ್ರಕ್ರಿಯೆಗೆ ಸಂವಿಧಾನಾತ್ಮಕ ಸ್ಥಾನಮಾನ ಕೊಡಬೇಕೆಂದು ಪ್ರತಿಪಾದಿಸಿದುದು ಗಮನ ಸೆಳೆಯುದೇ ಹೋಗಲಿಲ್ಲ.
ಕಾಂಗ್ರೆಸಿನದು ನಿಜವಾದ ಯಜಮಾನಿಕೆ (ಯಜಮಾನಿಯ) ಸಂಸ್ಕೃತಿ. ಸಾಮ್ರಾಜ್ಞಿಯ ಕುಡಿಗಣ್ಣೋಟವಿಲ್ಲದೇ ಯಾರೂ ಏನೂ ಮಾಡುವಂತಿಲ್ಲ ಮಾತಾಡುವಂತಿಲ್ಲ. ಇದನ್ನು ಅರಿತವರಿಗೆ ಈ ಬೆಳವಣಿಗೆಗಳಲ್ಲಿ ಒಂದು ವಿಶಿಷ್ಟ ತಂತ್ರಗಾರಿಕೆ ಗೋಚರವಾಗದೇ ಇರದು. ಅದೇನೆಂದರೆ ಕಾಂಗ್ರೆಸಿಗೆ ಇಂದು ಮನಮೋಹನ ಸಿಂಗರ ಉಪಯುಕ್ತತೆ ಮುಗಿದಿದೆ. ಧುರೀಣತ್ವದ ಬದಲಾವಣೆ ಅನಿವಾರ್ಯ. ರಾಹುಲ ಗಾಂಧಿಯವರಿಗೆ ಈ ಜವಾಬ್ದಾರಿಯನ್ನು ವಹಿಸಲು ವೇದಿಕೆ ಸಿದ್ದವಾಗುತ್ತಿದೆ. ಸ್ನಾನದ ಮನೆಯಲ್ಲಿ ಬಳಸಿ ತಿಪ್ಪೆಗೆ ಎಸೆಯಲಾಗುವ  ಕಾಗದದಂತೆ ಮನಮೋಹನ ಸಿಂಗರನ್ನು ಕಾಂಗ್ರೆಸು ಉಪಯೋಗಿಸಿದೆ.ಮಾಯಾವತಿ
ಇನ್ನು ಭಾಜಪ.ದ ವಿಷಯ. ವಾಜಪೇಯಿ-ಆದ್ವಾನಿ ಪರ್ವದ ನಂತರ ಧುರೀಣ ಸ್ಥಾನದಲ್ಲಿ ಬಂದು ಕುಳಿತ ಎರಡನೆಯ ತಲೆಮಾರಿನ ನಾಯಕರಾದ ಮಹಾರಾಷ್ಟ್ರದ ಜವಾಬ್ದಾರಿಯಿಂದ ನೆರವಾಗಿ ಪಕ್ಷದ ರಾಷ್ಟ್ರಾಧ್ಯಕ್ಷರ ಪದದಲ್ಲಿ ಕುಳಿತ ನಿತಿನ ಗಡಕರಿ, ಅಥವಾ ಸಂತ್ತಿನ ಎರಡು ಸದನಗಲ್ಲಿನ ಭಾಜಪದ ನಾಯಕರುಗಳಾದ ಶ್ರೀಮತಿ ಸುಷ್ಮಾ ಸ್ವರಾಜ ಮತ್ತು ಅರುಣ ಜೇಟ್ಲೆಯವರಾಗಲೀ ಅಪೇಕ್ಷಿತ ಮಟ್ಟಕ್ಕೆ ಬೆಳೆದು ಪಕ್ಷದ ಅಗುಹೋಗುಗಳ ಮೇಲೆ ತಮ್ಮ ಛಾಪು ಬೀರಲು ಸಾಧ್ಯವಾಗಿಲ್ಲ. ಇವರ ಹಿರಿತನದಲ್ಲಿ ಏನಾಗಬಹುದು ಎನ್ನುವದಕ್ಕೆ ಕರ್ನಾಟಕದಲ್ಲಿ ಅವರುಗಳು ಯಡೆಯೂರಪ್ಪ ಮತ್ತು ಜನಾರ್ದನ ರೆಡ್ಡಿ ಪ್ರಕರಣಗಳನ್ನು ನಿರ್ವಹಿಸಿದ ರೀತೀಯೇ ಸಾಕ್ಷಿ. ಕಿರಿಯರಿಗೆ ಹಿರಿತನ ಕೊಟ್ಟು ನೇಪಥ್ಯಕ್ಕೆ ಸರಿದಿರುವ ಅದ್ವಾನಿಯವರ ಛಾಯೆ ಪಕ್ಷದ ಮೇಲೆ ಇನ್ನೂ ಇದೆ. ಅವರ ನೆರಳಲ್ಲಿಯೂ ಇನ್ನು ಹಲವಾರು ಧುರೀಣರು ಬದುಕುತ್ತಿದ್ದಾರೆ.
ಭಾಜಪದ ಮುಂದಿರುವ ದ್ವಂದ್ವವೆಂದರೆ ಯಾರ ಹಿರಿತನದಲ್ಲಿ ಮುಂದಿನ ಚುನಾವಣೆ ಎದುರಿಸಿಬೇಕು ಮತ್ತು ಯಾರನ್ನು ಭಾವಿ ಪ್ರಧಾನಿ ಮಂತ್ರಿಗಳು ಎಂದು ಬಿಂಬಿಸಬೇಕು ಎನ್ನುವಲ್ಲಿ ಪಕ್ಷದ ವಲಯಗಳಲ್ಲಿ ಬಹು ಜಿಜ್ಞಾಸೆ ಇದೆ. ಮತ್ತೆ ಆದ್ವಾನಿಯವರನ್ನು ಕರೆತಂದರೆ ಒಂದು ತರಹದ ಇರುಸು ಮುರುಸು. ಕರೆತರದಿದ್ದರೆ ಇನ್ನೊಂದು ತರಹದ ಇರುಸು ಮುರುಸು. ಇದರೆ ಹಿನ್ನೆಲೆಯಲ್ಲಿಯೇ, ಪಕ್ಷದ ಅಧ್ಯಕ್ಷ ಗಡಕರಿಯವರ ಇತ್ತೀಚಿನ ಹೇಳಿಕೆ- ಪ್ರಧಾನ ಮಂತ್ರಿ ಹುದ್ದೆ ನಿರ್ವಹಿಸಲು ಬಹಳ ಮಂದಿ ಸಮರ್ಥರು ಇರುವದರಿಂದ ಯಾರ ಹೆಸರನ್ನೂ ಈಗ ಮುಂದು ಮಾಡುತ್ತಿಲ್ಲ ಎನ್ನುವದನ್ನು ಅರ್ಥೈಸಿಕೊಳ್ಳಬೇಕು.
ಈ ದ್ವಂದ್ವದಲ್ಲಿ ಭಾಜಪದ ಪ್ರಸಕ್ತ ನಾಯತ್ವ ಮುಳುಗಿರುವಾಗ ತಾವು ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಅಂದೋಲನ ಕೈಕೊಳ್ಳುತ್ತೇವೆ ಎಂದು ಹೇಳಿಕೆ ನೀಡುವದರ ಮೂಲಕ ಭಾಜಪದ ಅತ್ಯುಚ್ಚ ನಾಯಕರಾದ ಅದ್ವಾನಿಯವು ಪಕ್ಷವನ್ನು ಪೇಚಿನಲ್ಲಿ ಸಿಲುಕಿಸಿದ್ದಾರೆ. ಇದು ಪಕ್ಷದ ನಿರ್ಣಯವಂತೂ ಅಲ್ಲ. ಇದರಿಂದ ಪಕ್ಷಕ್ಕೆ ಲಾಭ ಬರುವದರ ಬದಲು ಹಾನಿಯಾಗುವದೇ ಜಾಸ್ತಿ ಎನ್ನುವದು ಮೇಲ್ನೋಟಕ್ಕೆ ಕಾಣುವ ಸಂಗತಿ.
ಏಕೆಂದರೆ ಭ್ರಷ್ಟಾಚಾರ ನಿರ್ಮೂಲನೆ ವಿಚಾರವು ಹಿಂದೆ ರಾಜೀವ ಗಾಂಧಿಯವರ ಕಾಲದಲ್ಲಿ ಬೋಫೊರ್ಸ ಹಗರಣದ ಹಿನ್ನೆಲೆಯಲ್ಲಿ ಅಂದು ವಿ.ಪಿ. ಸಿಂಗರವರು ಕೈಕೊಂಡಿದ್ದ ಜನಾಂದೋಲನದಂತೆ ಕಾಂಗ್ರೆಸ ವಿರುದ್ದದ ಚಳವಳಿಯಾಗಿಲ್ಲ. ಇಂದು ಭ್ರಷ್ಟಾಚಾರದಿಂದ ಎಲ್ಲ ರಾಜಕೀಯ ಪಕ್ಷಗಳು ಕಲಂಕಿತವಾಗಿವೆ. ಯಾರ ಹಸ್ತವೂ ಶುಧ್ದವಾಗಿಲ್ಲ. ಯಾವ ರಾಜಕೀಯ ಪಕ್ಷಗಳು ಇದರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಭ್ರಷ್ಟಾಚಾರದ ಹಣದಿಂದಲೇ, ರಾಜಕೀಯು ಮಾಡುವ ಚುನಾವಣೆ ನಡೆಸುವ ಯಾವ ರಾಜಕೀಯ ಪಕ್ಷಗಳಿಗೂ ಈ ಪಿಡುಗನು ನಿವಾರಿಸುವದಕ್ಕೆ ಪರಿಣಾಮಕಾರಿ ಕ್ರಮUಳನ್ನು ತೆಗೆದುಕೊಳ್ಳುವ ಪರವಾಗಿಲ್ಲ. ತಾವು ನಿಂತಿದ್ದ ಮರದ ಕೊಂಬೆಯನ್ನು ಯಾರು ತಾನೇ ಕತ್ತರಿಸಲು ಯತ್ನಿಸಿಯಾರು?  ಇವರು ಯಾರೂ ರಾಜಕೀಯದ ಲೇಪವಿಲ್ಲದ ಅಣ್ಣಾ ಹಜಾರೆಯವರಲ್ಲ.
ಲಾಲೂ ಪ್ರಸಾದ್ ಯಾದವ್ವಿಶೇಷವಾಗಿ ದೇಶಾದ್ಯಂತ ಕೈಕೊಳ್ಳುವ ತಮ್ಮ ಚಳುವಳಿಯಲ್ಲಿ ವಿಶೇಷವಾಗಿ ಕರ್ನಾಟಕದ ಭಾಜಪ ಸರಕಾರದ ಹಗರಣಗಳು, ಅದರ ಹಿನ್ನೆಲೆಯಲ್ಲಿ ಪದತ್ಯಾಗ ಮಾಡುವ ಮುಖ್ಯಮಂತ್ರಿಯ ಅನಿವಾರ್ಯತೆಯನ್ನು ಅಕ್ರಮ ಗಣಿಗಾರಿಕೆಯಲ್ಲಿ ಭೂಹಗರಣಗಳಲ್ಲಿ ಸೆರೆಮನೆ ಸೇರಿದೆ ಮಂತ್ರಿಗಳು, ಕೇಸುಗಳನ್ನು ಎದುರಿಸುತ್ತಿರುವ ಯಡೆಯೂರಪ್ಪನವರ ಬಗ್ಗೆ ಪ್ರಶ್ನೆಗಳು ಬಂದಾಗ ಅದ್ವಾನಿಯವರು ಏನು ಉತ್ತರ ಕೊಡಲು ಸಾಧ್ಯ? ನಡೆಯುತ್ತಿದ್ದ ವಿದ್ಯಮಾನಗಳ ಅರವಿದ್ದರೂ, ಅದನ್ನು ತಡೆಯುವದಕ್ಕೆ ಏನು ಕ್ರಮಕೈಗೊಳ್ಳದ  ಮತ್ತು ಒಂದು ರೀತಿಯಲ್ಲಿ ಇದನ್ನು ಬೆಳೆಯುವಂತೆ ಅಪರೋಕ್ಷ ಬೆಂಬಲ ನೀಡಿದ ಭಾಜಪದ ವರಿಷ್ಠ ನಾಯಕತ್ವದ ಬಗ್ಗೆ ಅದ್ವಾನಿಯವರು ಏನು ಹೇಳಬಹುದು. ಯಾವ ರೀತಿಯಿಂದ ನೋಡಿದರು, ಇರುಸುಮುರುಸಾಗುವದು ಕಟ್ಟಿಟ್ಟ ಬುತ್ತಿ.
ಹಾಗಾದರೆ ಈ ಹೆಜ್ಜೆಯನ್ನು ಇಡಲು ಅದ್ವಾನಿಯವರು ಏಕೆ ಉದ್ಯುಕ್ತರಾಗಿದ್ದಾರೆ. ಅವರು ಇದರ ಮೂಲಕ ತಮ್ಮನ್ನು ಪ್ರಧಾನಿ ಪಟ್ಟದ ಅಭ್ಯರ್ಥಿ ಎಂಬುದನ್ನು ಬಿಂಬಿಸಲು ಹೊರಟಿದ್ದಾರೆ ಎಂದು ಜನ ಮಾತನಾಡಲಿಕ್ಕಿಲ್ಲ ಆದರೆ ಭಾಜಪದ ಆಂತರಿಕ ವಲಯದಲ್ಲಿ ಮಾತ್ರ ಗುಸುಗುಸು ಹಬ್ಬಿದೆ.  ಈ ಗೊಜಲನ್ನು ಅದ್ವಾನಿಯವರೇ ನಿವಾರಿಸಬೇಕು. ಅವರು ಇದರ ಬಗ್ಗೆ ಏನನ್ನೂ ಇನ್ನೂ ಹೇಳಿಲ್ಲ.

No comments:

Post a Comment